ಜನಸ್ವಾತಂತ್ರ್ಯದ ಸೂರ್ಯೋದಯದಲಿ

ಜನಸ್ವಾತಂತ್ರ್ಯದ ಸೂರ್ಯೋದಯದಲಿ
ಸುಸ್ವಾಗತ ಜನಮನ ದೊರೆಗೆ
ಸುವಿಚಾರದ ಮಧುವೆರೆಯುತ ಬಂದಿಹ
ಶ್ರೀ ಮಧುಕರ ದೇವರಸರಿಗೆ || ಪ ||

ಸೆರೆಮನೆಯಿಂದಲೆ ಸೂತ್ರವ ಆಡಿಸಿ
ಎರೆದಿರಿ ಸ್ಫೂರ್ತಿಯ ಯುವಜನಕೆ
ದಾಸ್ಯದ ದುಃಖವ ತೊಲಗಿಸಿದಾತನೆ
ಸ್ವಾಗತವಿದೊ ಕರ್ನಾಟಕಕೆ || 1 ||

ತೆಂಕಣ ಅಡವಿಯ ಘೀಳಿಡುವಾನೆಯ
ಸೊಂಡಿಲ ಕಹಳೆಯ ಮೊಳಗಿನಲಿ
ಸಂತರ ಶರಣರ ದಾಸವರೇಣ್ಯರ
ಬೋಧನೆ ಕೀರ್ತನೆ ವಚನದಲಿ || 2 ||

ತುಂಗಾಭದ್ರೆಯ ಕೃಷ್ಣಾ ಕಪಿಲೆಯ
ಕಾವೇರಿಯ ಕಲರವದೊಳಗೆ
ಕನ್ನಡ ಜನದಾತ್ಮೀಯತೆ ಸೂಸುವ
ಶ್ರೀಗಂಧದ ಸೌರಭದೊಳಗೆ || 3 ||

ಭಾರತಭವಿತವ್ಯದ ಸಾರಥಿಯೇ
ನಿರ್ಭಯವೇ ನಿಮ್ಮಯ ರೀತಿ
ಘನತೆ ಮಹಾನತೆ ಸರಳತೆಯೊಂದಿಗೆ
ಸಂಗಮಿಸಿರೆ ಸ್ವದೇಶ ಪ್ರೀತಿ || 4 ||

Leave a Reply

Your email address will not be published. Required fields are marked *