ಜಾಗೃತಗೊಳ್ಳಲಿ ಎಲ್ಲೆಡೆಯೂ
ನವಶಕ್ತಿಯ ಸ್ಫುರಣ
ಜ್ವಲಿಸಲಿ ನಾಡಿನ ಪ್ರತಿಕಡೆಯೂ
ತಾರುಣ್ಯದ ಕಿರಣ
ಸಜ್ಜನ ಶಕ್ತಿಯ ಜಾಗರಣ…….
ದುರ್ಜನ ಶಕ್ತಿಯ ಸಂಹರಣ || ಪ ||
ಪ್ರತಿ ಎದೆಯಾಳದಿ ಸ್ಫುಟಗೊಳಲಿ
ಧ್ಯೇಯದ ಪುನರವತಾರ
ಪ್ರತಿಧ್ವನಿ ಮಾರ್ದನಿಗೊಳುತಿರಲಿ
ತಾಯ್ನಾಡಿಗೆ ಜಯಕಾರ
ಒಂದೇ ನಾಡಿನ ಒಂದೇ ತಾಯಿಯ
ಸುತರೆಮ್ಮಯ ಮಮಕಾರ || 1 ||
ಹದಿಹರೆಯದ ನವ ಹುರುಪಿರಲಿ
ಮುನ್ನುಗ್ಗುವ ಛಲವಿರಲಿ
ಅನುದಿನ ಸ್ಫೂರ್ತಿಯ ಸೆಲೆಯಿರಲಿ
ಹೊಸತನದಾ ಸಾಧನೆಯಿರಲಿ
ನವ ಉತ್ಸಾಹದ ನವ ಉನ್ಮೇಷದ
ಯುವತನವೇಳಲಿ ಮನಗಳಲಿ || 2 ||
ವಿವೇಕ ವಾಣಿಯ ಗುಣುಗುಣಿಸಿ
ಕ್ರಾಂತಿಯ ಕಾರ್ಯಕೆ ಧುಮುಕಿ
ಅನೇಕ ಮತಗಳ ಬದಿಗಿರಿಸಿ
ಸಮರಸಭಾವದಿ ಬದುಕಿ
ಒಗ್ಗೂಡುತ ಒಂದಾಗುತ ಸಾಗುವ
ತಾಯ್ನಾಡಿನ ವೈಭವ ಗುಡಿಗೆ || 3 ||