ಹೃದಯ ಸಿಂಹಾಸನದ ಮೇಲೇರು ಬಾ ದೇವಿ –
ಓ ಭಾರತದ ಸ್ವಾತಂತ್ರ್ಯದಧಿ ದೇವಿ !
ದಾಸ್ಯ ಶೃಂಖಲೆಯೆಲ್ಲ ನಿನ್ನಂಘ್ರಿ ಸ್ಪರ್ಶಕ್ಕೆ
ಸಿಡಿದೊಡೆದು ಬೀಳುವುದು ಸೀಳು ಹೋಳಾಗಿ || ಪ ||
ಅಡಿಯಿಡಲು ಎಡೆದೊರೆಯದೆಂದು ಬೆದರುವೆಯೇಕೆ
ಎಡೆಗೊಡರು ದ್ರೋಹಿಗಳು ಎಂಬ ಭಯವೇನು ?
ಅಡಿಗೊಂದು ತಲೆ ಬುರುಡೆ ಬಲಿನೀಡಿ ನಡೆಸುವೆವು
ಭಯವೇಕೆ ಬಾರಮ್ಮ ಬೆದರೆದೆಯೆ ನೀನು || 1 ||
ಪಟ್ಟಿಹೆವು ಕಡು ಕಷ್ಟ ಪಟ್ಟ ಕಟ್ಟಲು ನಿನಗೆ
ಬೇಗನೀ ಬಲಿಪೀಠದಾ ಮೆಟ್ಟಿಲೇರಿ ಬಿಡು
ದಿಟ್ಟತನದಿಂದಡಿಯ ಮುಂದಿಟ್ಟು ದುಷ್ಟರನು
ಮೇಣ್ ದಾಸ್ಯದಟ್ಟಹಾಸವನು ಮೆಟ್ಟಿಬಿಡು || 2 ||
ನಿನಾಗೆನಿತೊ ಕಲಿಗಳು ಬಲಿಗಳಾದರು
ಮುಂದಂತೆ ಇಂದು ಸಹ ಆಗುತಲೆ ಇಹರು
ಆಳ್ಬಲವ ಮೀರಿಹರು ತೋಳ್ಬಲವ ತೋರಿಹರು
ದೇಶಭಕ್ತರೆನಿಬರೋ ಅಮರರಾಗಿಹರು || 3 ||
ಇನ್ನೆಷ್ಟು ಗಂಡುಗಲಿಗಳ ಗುಂಡಿಗೆಗೆ ಗುಂಡು
ಬಡಿಯುವುದೋ – ಇನ್ನೆನಿತು ರಕ್ತ ಹರಿಯುವುದೋ?
ಇನ್ನಷ್ಟು ಮತ್ತಷ್ಟು ಕೊಟ್ಟಷ್ಟು ಕೇಳುತಿಹೆ
ನಿನ್ನ ಕೆನ್ನಾಲಿಗೆಯು ಎಂದು ತಣಿಯುವುದೋ
ರಾಷ್ಟ್ರವಿದು ನಷ್ಟಗೊಳ್ಳುವ ಮುನ್ನ ಏಳಮ್ಮ
ಸುಮ್ಮನೆ ನಮ್ಮನಿನ್ನೆಷ್ಟು ಪರಿಕಿಸುವೆ
ಹೆಜ್ಜೆ ಹೆಜ್ಜೆಗು ಹುತಾತ್ಮರ ತಲೆಯೆ ಬೇಕೇನು
ಹರಿವ ಭಕ್ತರ ರಕ್ತ ನಿನಗಿಷ್ಟವೇನು ?
ಬಲಿದಾನಕೊಂದಕೇ ಒಲಿಯುವಳು ನೀನು
ಆದರೂ ನಿನ್ನರ್ಚನೆಗೆ ಸಿದ್ಧ ನಾನು || 4 ||