ಹಿಂದೂ ವೀರನೆ ನಿನ್ನೊಳು ಅಡಗಿಹ ಛಲಬಲ ಸಾಹಸ ಹೊಮ್ಮುವುದೆಂದು?
ಈ ನಾಡಿನ ನರನಾಡಿಗಳಲ್ಲಿ ಕ್ಷಾತ್ರಪ್ರವಾಹವು ಉಕ್ಕುವುದೆಂದು?
ಬಾ ಬಾ ನಾಡನು ಕಟ್ಟಲು ಇಂದು || ಪ ||
ವೀರಧನುರ್ಧರ ಆ ದಾಶರಥಿ
ಚಕ್ರವ ಪಿಡಿದಿಹ ಪಾರ್ಥಸಾರಥಿ
ನಿನ್ನೆದೆ ಗುಡಿಯಲಿ ಪಡಿಮೂಡಿಹರು
ಅರಿವಿನ ಒಳಗಣ್ ತೆರೆಯೋ ಇಂದು || 1 ||
ಖಡ್ಗ ಭವಾನಿಯ ವಾರಸುದಾರ
ವೀರಶಿವಾಜಿಯ ಓ ಸರದಾರ
ಸಾಹಸಕಾರ್ಯಕಿದೇ ಸುಮುಹೂರ್ತ
ವಿಜಯರಣಾಂಗಣದೊಳು ಧುಮುಕಿಂದು || 2 ||
ಕೈಜಾರಿದ ಅವಕಾಶಗಳೆನಿತೋ?
ಕೈಮೀರಿದ ಸಂದರ್ಭಗಳೆನಿತೋ?
ಕಳೆದಿಹ ಕಾಲವು ಬಾರದು ಮರಳಿ
ಕ್ಷಣಕ್ಷಣವೂ ಬೆಲೆಬಾಳುವುದಿಂದು || 3 ||
ಮೈಮರೆವಿನ ಮೈ ಮುರಿಯುವುದೆಂದು?
ಶೌರ್ಯಪರಾಕ್ರಮ ಮೆರೆಯುವುದೆಂದು?
ನಾಡಭವಿಷ್ಯದ ಬಿಂಬವ ಕಡೆದು
ಪ್ರಾಣ ಪ್ರತಿಷ್ಠೆಯ ಗೈಯುವುದೆಂದು? || 4 ||