ಹೆತ್ತ ಒಡಲಿನ ಹತ್ತು ಹೈಕಳು ಮುಷ್ಟಿಕೈಗಳ ತೆರದಿ
ಒಟ್ಟುಗೂಡುತ ಕಟ್ಟಲು ಬನ್ನಿ ಸ್ವಾಭಿಮಾನವ ಭರದಿ
ಚಲಿಸಲಿ ನಮ್ಮಯ ನಡಿಗೆ……….. ಗ್ರಾಮ ವಿಕಾಸದ ಕಡೆಗೆ || ಪ ||
ನಾಡಿನ ನಡುವಿನ ಕಟ್ಟೆಯ ಮ್ಯಾಗೆ ಕುಳಿತಿರುವಾ ಯಜಮಾನ
ನೋವನು ಉಂಡಿಹ ಊರಿನ ಮಂದಿಗೆ ಕೊಡುವನು ನ್ಯಾಯ ತೀರ್ಮಾನ
ಹೊಲದಲಿ ಗಳಿಸಿದ ಕೂಳನು ಹಂಚುವ ಒಲವಿನ ಪರಿ ನೋಡೋಣ || 1 ||
ಬೆಳಗಾಗೆದ್ದು ಮಡಿಯಲಿ ಮಿಂದು ದ್ಯಾವರ ಪೂಜೆಯ ಗೈದು
ಮನೆಯನು ಸಾರಿಸಿ ಆಕಳ ಪೂಜಿಸಿ ಹೊಲಗದ್ದೆಗಳಲಿ ದುಡಿದು
ಸುಗ್ಗಿಯ ಕಾಲಕೆ ಹಿಗ್ಗುತ ಬೆರೆಯುವ ಹಬ್ಬದ ಪರಿ ನೋಡೋಣ || 2 ||
ಆಧುನಿಕತೆಯ ಸೋಗಿಗೆ ಸೋಲುತ ಸೊರಗುವ ಪರಿ ನಮಗ್ಯಾಕೆ
ಆಗಸದೆತ್ತರ ಜ್ಞಾನವ ನೀಡಿದ ಹಿರಿತನವನು ಬಿಡಬೇಕೆ
ಅನ್ಯರು ನೀಡುವ ಎಂಜಲಿಗೇ ಕೈಚಾಚದೆ ಮುನ್ನಡೆಯೋಣ || 3 ||
ನೋವು ನಿರಾಶೆಯ ಸ್ವಾರ್ಥದ ಬಂಧನ ಕಳಚುವ ಸಮಯವಿದೆಮಗೆ
ಸಂಸ್ಕೃತ ಸಂಸ್ಕೃತಿ ವಿಶ್ವದ ಉನ್ನತಿ ಬೆಳೆಸಲು ಇದು ಶುಭಗಳಿಗೆ
ಸಮರಸ ಬದುಕಲಿ ಸೇವೆಯ ಸೂತ್ರದಿ ಜನಮನವನು ಬೆಸೆಯೋಣ || 4 ||