ಹರ ಮಹದೇವ್ ಹರ ಮಹದೇವ್
ಹರ ಹರ ಹರ ಹರ ಹರ ಮಹದೇವ್ || ಪ ||
ಶಿವರಾಯನ ಮಹದೇವನು ಒಮ್ಮೆ ಬಾರೆಂದು ಬಳಿಗೆ ಕರೆಯಿಸುತ
ಶಿವ ನೀ ಧರ್ಮವ ಸಲಹಲು ಬೇಗನೆ ಭಾರತ ಭೂಮಿಗೆ ನಡೆಯೆಂದ || 1 ||
ಅಂಬಾ ಭವಾನಿ ಲೋಕದ ತಾಯಿ ಶಿವನನು ಅಂದು
ಹರಸಿದಳು ಇಂಬಾಗಿ ವಿಜಯಲಕ್ಷ್ಮಿಯ ಸಂತತ ಬವರದಿ ನಿನ್ನಲಿ
ನಿಲಲೆಂದು || 2 ||
ಶಿವನಂದು ನಮ್ಮ ಭೂಮಿಗೆ ಬಂದ ಹರನಾಣತಿಯನು ನಡೆಸಲಿಕೆ
ಅವನಾಣತಿಯನು ನಡೆಸಿದ ಮನುಜಗೆ ದೊರೆವುದು ಸುಖ ಇಹಪರಗಳಲಿ || 3 ||
ಶಿವರಾಯ ನಮ್ಮ ಶಿವರಾಯ ಹಗೆ ಮುಗಿಲಿಗೆ ಇವ ಪವಮಾನ
ಬವರದಿಳವನಾ ಉಜ್ವಲ ತೇಜವಾ ಬಗೆವುದು ಸಾಧ್ಯವೆ ಮನುಜರಿಗೆ || 4 ||
ಶಿವರಾಯ ನಮ್ಮ ಶಿವರಾಯ ಹಗೆಗಳಿಗಿವನು ಜವರಾಯ
ಶಿವರಾಯನ ಹೆಸರುಸಿರಿದ ಮನುಜಗೆ ಬಗೆವುದು ನೆರೆ ತುಂಬಿದ ತೇಜ || 5 ||
ಶಿವರಾಯನ ಆಳ್ವಿಕೆಯೇ ಆಳ್ವಿಕೆ ಅವನೂಳಿಗವೇ ಊಳಿಗವು
ಶಿವರಾಯನ ಆಣತಿಯಲಿ ನಡೆದಗೆ ಸವನಿಸುವುದು ಸುಖ ಇಹಪರದಿ || 6 ||
ಭಾರತ ಭೂಮಿಯ ಸಲಹಲಿಕೆಂದು ಶಿವರಾಯ ಬಂದ ಶಿವರಾಯ
ಅರಿಯ ಧರ್ಮ ನಿಲಿಸಲಿಕೆಂದು ಶಿವರಾಯ ನಿಂದ ಶಿವರಾಯ || 7 ||
ಶಿವರಾಯ ಶತ್ರುರಾಯರ ಗಂಡ ಶಿವರಾಯ ಹಗೆಯ ಜವರಾಯ
ತವಕಿತ ಮ್ಲೇಚ್ಛರ ಕತ್ತಲ ತಂಡಕೆ ಶಿವರಾಯ ಚಂಡ ಮಾರ್ತಾಂಡ || 8 ||
ಶಿವರಾಯ ಸುಖದಿ ಸಂತತ ಬಾಳಲಿ ಶಿವರಾಯ ನಮ್ಮ ಶಿವರಾಯ
ಭಗವಾತಗೆ ಆಯುಷ್ಯವ ನೀಡಲಿ ಭವೆ ನೀಡಲಿ ನಿಜ ವಿಜಯವನು || 9 ||
ಹರ ಮಹದೇವ್ ಹರ ಮಹದೇವ್ ಹರ ಮಹದೇವ್ ಹರ ಮಹದೇವ್
ಹರ ಮಹದೇವ್ ಹರ ಮಹದೇವ್ ಹರ ಹರ ಹರ ಹರ ಹರ ಮಹದೇವ್ || 10 ||
(ರಚನೆ: “ಶ್ರೀನಿವಾಸ”, ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರರ “ತಾವರೆ” ಕವನ ಸಂಕಲನದಿಂದ, 1930)