ಹಳೆಯಬೀಡಿನ ಬಳಿಯ ಹೊಯ್ಸಳೇಶನ ಗುಡಿಯ
ಹೊರವಲಯದಲಿ ಹೋಳುಹೋಳಾಗಿ ಗೋಳಿಡುತ || ಪ ||
ಪಾಳು ಬಿದ್ದಿಹ ಕಲ್ಲುಗಳ ಕಣ್ದೆರೆದು ನೋಡು !
ಹಾಳು ಹಂಪೆಯ ಪಾಳಿನೊಳಗೊಮ್ಮೆ ಓಡಾಡಿ
ಅಂದಳಿದ ಮಾತೆಯರ ಕಂಬನಿಯೆ ಕಲ್ಲಾಯ್ತೊ
ಎಂದೆನಿಪ ಆ ಮೂಕ ರೋದನದುಲಿಯ ಕೇಳು –
ಮನಗೊಟ್ಟು ಕಿವಿಗೊಟ್ಟು ಕೇಳು ;
ಏಳು ಭಾರತೀಯ ಮೇಲೇಳು ! || 1 ||
ಬೇಲೂರ ಬಾಲೆಯರ ಬೆಡಗು ಬಿನ್ನಾಣಗಳ
ಕೈಯಾರ ಕೆಡಿಸಲಾಶಿಸಿದ ಕೇಡಿಗಳಾರು ?
ಜಗದಚ್ಚರಿಯ ಶಿಲ್ಪ ಸೌಂದರ್ಯ ಮೂರ್ತಿಗಳ
ಅಂದಚಂದಗಳನಳಿಸಲೆಳೆಸಿದ ಖಳನಾರು ?
ಕನ್ನಡದ ಕುಲ ವನಿತೆಯರ ಕಲಂಕಗೊಳಿಸಲು
ಕೈಹಚ್ಚಲುಜ್ಜುಗಿಸಿದಾ ಮದೋನ್ಮತನಾರು ?
ಕೇಳು ಭಾರತೀಯ ನೀ ಕೇಳು ;
ಏಳು ಭಾರತೀಯ ಮೇಲೇಳು ! || 2 ||
ಭಾರತಾಂಬೆಯ ಕಂದ ಭಾರತೀಯರ ಬಂಧು
ನೀನೆಂದು ಹೆಮ್ಮೆಯಿಂದೆದೆ ತಟ್ಟಿ ಹೇಳಿಂದು ;
ನೂರಾರು ಗುಡಿಗಳನೊಡೆದು ಪುಡಿಯಗೈದವರು
ಮತ್ತೊಮ್ಮೆ ಮುಟ್ಟದೊಲು ಮುನ್ನೆಚ್ಚರಿಕೆ ಹೇಳು ;
ಹಗೆತನದ ಹೊಗೆಯಾಡುವರು ನಡುಗುವೊಲು ಹೇಳು ;
ಕೇಳ್ವವರು ಕಂಪಿಸುವವೊಲು ನೀ ಕೂಗಿ ಹೇಳು !
ಮೂಕ ಭಾರತೀಯ ಮಾತಾಡು
ಏಳು ಭಾರತೀಯ ಮೇಲೇಳು ! || 3 ||