ಗೌರೀಶಂಕರದೆತ್ತರಕೇರಲಿ

ಗೌರೀಶಂಕರದೆತ್ತರಕೇರಲಿ
ಜೀವನದಾಕಾಂಕ್ಷೆಯ ಪರ್ವತವು
ಗಗನದ ವರವಿಸ್ತಾರವ ತಳೆಯಲಿ
ಹೃದಯದ ಮಹದಾಸೆಯ ಸಾಗರವು || ಪ ||

ಧರ್ಮದ ಭೂಮಿಯ ದಿವ್ಯಾಕಾಶದ
ನಾಡಿನ ಒಡೆತನ ವಹಿಸುವರಾರು ?
ಇಲ್ಲೆಮಗಾಗಿಯೆ ಕಾಯುತ ಕರೆಯುತ
ಭಾಗ್ಯವೆ ಕುಳಿತಿದೆ ಬರುವವರಾರು ? || 1 ||

ಸಿಂಧೂಸಾಗರ ಹಿಂದೂ ಸಾಗರ
ಗಂಗಾಸಾಗರಗಳ ಪರಿವಾರ
ಸುಂದರ ವನಗಳು ಪ್ರೀತಿಯ ಜನಗಳು
ತೆರೆತೆರೆ ಗಿರಿಶಿಖರದ ಸಂಸಾರ ! || 2 ||

ನಮ್ಮಯ ನಾಡನು ಬಣ್ಣಿಪ ಹಾಡನು
ಹೇಳಲು ಕೇಳಲು ಕನಿಕರಿಸುವೆಯಾ ?
ಜನಗಳ ಪಾದದ ಧೂಳನು ತೊಳೆಯಲು
ಹಂಬಲಿಸುತ ಕಂಬನಿ ಹರಿಸುವೆಯಾ ? || 3 ||

ಜನತಾಕೋಟಿಯ ಹೃತ್ಸಾಮ್ರಾಜ್ಯದ
ಸಿರಿಹೊನ್ನಿನ ಹಿರಿಸಿಂಹಾಸನವು
ಏರುವರಿಲ್ಲದೆ ಕೂರುವರಿಲ್ಲದೆ
ನಿನಗಾಗಿಯೆ ಇಂದಾಗಿದೆ ತೆರವು || 4 ||

ಸಾಹಸಿಯಾದರೆ ಮೇಲಕೆ ಕರೆದಿದೆ
ಕೆಚ್ಚಿದ್ದರೆ ಬಾ ಬಾ ಬಾ ಎಂದು
ಆ ಕರೆಗೋಗೊಡು ಅಡಿಗಳ ಮುಂದಿಡು
ಅದನೇರಲು ಬಾ ಬಾ ಬಾ ಬಂಧು || 5 ||

Leave a Reply

Your email address will not be published. Required fields are marked *