ಗರಿಗೆದರಿದೆ ಹಿಂದುತ್ವವು ಇಂದು
ಭೋರ್ಗರೆದಿದೆ ಯುವಶಕ್ತಿಯ ಸಿಂಧು
ಯುಗದ ಸವಾಲಿಗೆ ಉತ್ತರ ನೀಡಿ
ಜಗದ ವಿಕಾಸಕೆ ನಾಂದಿಯ ಹಾಡಿ
ತಮಸೋಮಾ ಜ್ಯೋತಿರ್ಗಮಯ,
ಮೃತ್ಯೋರ್ಮಾ ಅಮೃತಂಗಮಯ || ಪ ||
ಶೃತಿ-ವೇದಂಗಳ ಅಂಗಳದಲ್ಲಿ,
ಗಂಗೆಯ ಮಂಜುಳ ಲಹರಿಗಳಲ್ಲಿ
ತುಂಗ ಹಿಮಾಚಲ ಶೃಂಗಗಳಲ್ಲಿ,
ಮೂಡಿಹುದು ನವವಿಶ್ವಾಸ
ಜಾಗೃತಿಯಾ ಜಯ ಜಯ ಘೋಷ || 1 ||
ಶತಶತಮಾನದ ಜಡತೆಯ ಸರಿಸಿ,
ಗತ ಚರಿತೆಯ ಅಪಮಾನವನೊರೆಸಿ
ದೃಢಸಂಕಲ್ಪದ ಹೆಜ್ಜೆಯನಿರಿಸಿ,
ಭೇದವನಳಿಸಿದೆ ಬಂಧುತ್ವ
ಮೇಲೆದ್ದಿಹುದು ಹಿಂದುತ್ವ || 2 ||
ಭಾರತ ತೋರಿದ ಧರ್ಮದ ಹಾದಿ,
ಮನುಜನ ಏಳ್ಗೆಗೆ ಭದ್ರ ಬುನಾದಿ
ಸಂಸ್ಕೃತಿಯೆಮದು ಅನಂತ ಅನಾದಿ,
ಭಾರತಮಾತೆಗೆ ಅರ್ಪಿತವು
ಜಗಜನನಿಯ ಕೀರ್ತಿಯ ಸುಮವು || 3 ||
ರಾಮನ ಮಂದಿರ ನವನಿರ್ಮಾಣ,
ಮುಡಿಪಿದು ಕೋಟಿ ತರುಣರ ಪ್ರಾಣ
ನಿಲ್ಲದಿದು ಗೆಲುವಿನ ಅಭಿಯಾನ,
ಅಂತಿಮ ಗುರಿ ಸೇರುವವರೆಗೂ
ವಿಜಯಧ್ವಜ ಹಾರುವವರೆಗೂ || 4 ||