ಗಂಗಾ ಯಮುನಾ ಸಂಗಮ ಸಮತಲಭೂಮಿ

ಗಂಗಾ ಯಮುನಾ ಸಂಗಮ ಸಮತಲ ಭೂಮಿ
ಸ್ವರ್ಗೀಯ ಸುಂದರ ಭೂಮಿ | ನಮ್ಮಿ ನಲ್ಮೆಯ ಭೂಮಿ |
ಸ್ವತಂತ್ರ ಭಾರತ ಭೂಮಿ || ಪ ||

ಸಗರ ಸುಪುತ್ರರ ಸದ್ಗತಿ ದಾತನ ಸಾಹಸದೊಸಗೆಯ ಭೂಮಿ
ಚಿನ್ನದ ತೆನೆಗಳ ಭೂಮಿ | ಉತ್ತರ ಭಾರತ ಭೂಮಿ | ಧರ್ಮಕ್ಷೇತ್ರದ
ಭೂಮಿ || 1 ||

ದಕ್ಷಿಣ ಪಶ್ಚಿಮ ಪೂರ್ವಕೆ ಸಾಗರ | ಸಮುದ್ರ ಯೋಧನ ಭೂಮಿ |
ಸುಭದ್ರ ಭಾರತ ಭೂಮಿ | ಪವಿತ್ರ ಭಾರತ ಭೂಮಿ | ಪಾವನಪುರುಷರ
ಭೂಮಿ || 2 ||

ಕನ್ಯಾಕುವರಿಯ ತೆರೆಮಾಲೆಗಳಿಂ | ಪದಯುಗ ತೊಳೆಯುವ ಭೂಮಿ |
ವಿಂಧ್ಯ ಹಿಮಾಚಲ ಕುಲಗಿರಿ ಶೃಂಗದೆ | ಜ್ಯೋತಿಯ ಬೆಳಗುವ ಭೂಮಿ |
ಗಿರಿಕಂದರಗಳ ಝರಿ ನಿರ್ಝರಗಳ | ಸರಸಿಗೆಳೆಸೆಯುವ ಭೂಮಿ |
ದಕ್ಷಿಣ ಭಾರತ ಭೂಮಿ | ನವೀನ ಭಾರತ ಭೂಮಿ | ಕಲೆಗಳ ಕುಸುರಿಯ
ಭೂಮಿ || 3 ||

ಒಡ್ಡುಗಳೆದ್ದಿರೆ ಕಾಲುವೆ ಹರಿದಿದೆ | ತೆಂಗಿನ ಕಂಗಿನ ಭೂಮಿ | ನೆಲ್ಲಿನ
ನಲ್ಮೆಯ ಭೂಮಿ |
ಕಾರಂಜಿಯ ಶತಸಾವಿರ ಚಿಮ್ಮಿದೆ | ವಿಜ್ಞಾನ ವಿನ್ಯಾಸದ ಭೂಮಿ |
ಜಲಸಮೃದ್ಧಿಯ ಭೂಮಿ | ಮಂಜುಳ ಭಾರತ ಭೂಮಿ |
ನವೀನ ಭಾರತ ಭೂಮಿ | ಹಸುರಿನ ಹಚ್ಚೆಯ ಸಿರಿಸಿಂಗಾರ ಶ್ಯಾಮಲ
ಸುಂದರ ಭೂಮಿ |
ಜ್ಯೋತ್ಸ್ನಾ ಪುಲಕಿತ ನಿಶೆಯೊಳು ರಂಜಿಪ | ನವೀನ ಭಾರತ ಭೂಮಿ || 4 ||

ಸರ್ವೋತ್ಥಾನದ ಶಂಖಧ್ವನಿಯಿದು ದೇವ ದತ್ತದಲಿ ಮೂಡಿ |
ನವೀನ ಜೀವನ ತತ್ವಜ್ಞಾನದ | ಪುರುಷ ಸೂಕ್ತವ ಹಾಡಿ |
ಹೆದೆ ಏರಿದ ಗಾಂಡೀವದ ತೆರದಲಿ | ಬರುವನು ಭಾರತ ಪುರುಷ |
ವಿಜೃಂಭಿಸಿ ಬರುವನು | ಬರುವನು ಭಾರತ ಪುರುಷ |
ನವ ನವೀನ ಭಾರತ ಪುರುಷ || 5 ||

Leave a Reply

Your email address will not be published. Required fields are marked *