ಗೆಲುದನಿಯು ಗುಡುಗುಡುಗಿ ಸೋಲು ಸೊಲ್ಲಡಗಿ
ನಾಳೆಗಳು ನಮದೆನಿಸಿವೆ ಭರವಸೆಯ ನಾಳೆಗಳು ನಮದೆನಿಸಿವೆ
ಶತಕವಿದನಳೆದು ಮರುಶತಕಕಿದೊ ಹಿಂದುತ್ವ
ವೀರರಸ ಹೊನಲುದಿಸಿದೆ || ಪ ||
ಕತ್ತಲೆಯ ಕೌರವರು ಸುತ್ತನೂರೆದ್ದಿರಲು
ಕ್ಷುದ್ರ ದೌರ್ಬಲ್ಯಗಳಿಗಿನ್ನೆಲ್ಲಿಯ ತಾಣ
ಪಾಂಚಜನ್ಯವು ಮೊಳಗೆ ಕರ್ಮಯೋಗದ ಕರೆಗೆ ಪಾಂಡವಗೆ ರೋಮಾಂಚನ
ಧರ್ಮಸಂರಕ್ಷಣೆಗೆ ರಾಷ್ಟ್ರಪುನರುನ್ನತಿಗೆ ಧರ್ಮವೆ ಅವತರಿಸಿದೆ || 1 ||
ನಮಗೋರ್ವಳೆ ತಾಯಿ ನಿತ್ಯವಾತ್ಸಲ್ಯಮಯಿ
ಅವಳು ಸಲಹಿದ ಸುತರು ನಾವೆಂಬ ನೆನಪು
ಬರದೆಂಬುದೇನಿಲ್ಲ ಎನ್ನ ಸಾಧನೆಯೆಲ್ಲ ತಾಯ ಗೌರವಕೇ ಮುಡಿಪು
ಅರ್ಪಣೆಯೊಳಗಾನಂದ ನೇರ್ಪುಗೊಂಡಿಹುದಿಲ್ಲಿ ರಾಷ್ಟ್ರೀಯತೆಯು ಮೆರೆದಿದೆ || 2 ||
ಕಪಟ ಮತಾಂತರ ಆಮಿಷ ಅಂಜಿಕೆ ನಾಡಿನ ನಾಡಿಯ ವ್ಯಾಪಿಸಿರೆ
ಸ್ವತ್ವವ ಮರೆಸಿ ವಿದೇಶೀಯ ಮೆರೆಸುವ ಭ್ರಮೆಗಳೆ ಬದುಕನು ರೂಪಿಸಿವೆ
ವಿಭಜನೆ ವಿಘಟನೆ ನೈತಿಕ ಪತನಕೆ ಧೈರ್ಯ ಮೇರುಗಳೆ ಕಂಪಿಸಿದೆ
ಮೃತ ಸಂಜೀವಿನಿ ಉತ್ತರವೆಂದರೆ ಹಿಂದುತ್ವದ ಉಸಿರೆ || 3 ||
ಎಲ್ಲರಿಗೂ ತುಂಬಾ ಪ್ರಯಜೋನೆ ಆಗೆದಿ. ಒಳ್ಳೆಯ ಪ್ರಯತ್ನ.