ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು !
ದೂರದಡವಿಯೊಳೆಲ್ಲಿ ಲೌಕಿಕ ವಿಷಯವಾಸನೆ ಮುಟ್ಟದೊ,
ಎಲ್ಲಿ ಗಿರಿಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೊ,
ಎಲ್ಲಿ ಕಾಮವು ಸುಳಿಯದೋ, – ಮೇಣ್
ಎಲ್ಲಿ ಜೀವವು ತಿಳಿಯದೋ
ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,
ಎಲ್ಲಿ ಆತ್ಮವು ಪಡೆದು ನಲಿವುದೊ ನಿಚ್ಚವಾಗಿಹ ಶಾಂತಿಯ,
ನನ್ನಿಯರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ,
ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ,
ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 1 ||
ಕುಟ್ಟಿ ಪುಡಿಪುಡಿ ಮಾಡು ಮಾಯೆಯು ಕಟ್ಟಿಬಿಗಿದಹ ಹಗ್ಗವ ;
ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ !
ಮುದ್ದಿಸಲಿ ಪೀಡಿಸಲಿ ದಾಸನು ದಾಸನೆಂಬುದೆ ಸತ್ಯವು !
ಕಬ್ಬಿಣವೋ ? ಕಾಂಚನವೋ ? ಕಟ್ಟಿದ ಕಣ್ಣಿ ಕಣ್ಣಿಯೆ ನಿತ್ಯವು
ಪಾಪ ಪುಣ್ಯಗಳೆಂಬುವು – ಮಾ
ತ್ಸರ್ಯ ಪ್ರೇಮಗಳೆಂಬುವು
ದ್ವಂದ್ವರಾಜ್ಯದ ಧೂರ್ತ ಚೋರರು ! ಬಿಟ್ಟು ಕಳೆ, ಕಳೆಯವರನು !
ಮೋಹಗೊಳಿಪರು, ಬಿಗಿವರಿರಿವರು ; ಎಚ್ಚರಿಕೆಯಿಂದವರನು
ತಳ್ಳು ದೂರಕೆ ಓ ವಿರಕ್ತನೆ ! ಹಾಡು ಚಾಗಿಯ ಹಾಡನು !
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು !
ಹಾಡು ಮುಕ್ತಿಯ ಗಾನವನು, ಓ ವೀರ ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 2 ||
ಕತ್ತಲಳಿಯಲಿ ; ಮಬ್ಬು ಕವಿಸುವ ಭವದ ತೃಷ್ಣೆಯು ಬತ್ತಲಿ ;
ಬಾಳಮೋಹವು ಮರುಮರೀಚಿಕೆ ; ಮಾಯೆ ಕೆತ್ತಿದ ಪುತ್ಥಳಿ !
ಜನನದೆಡೆಯಿಂ ಮರಣದೆಡೆಗಾಗೆಳೆವುದೆಮ್ಮನು ದೇಹವು ;
ಜನ್ಮಜನ್ಮದಿ ಮರಳಿ ಮರಳುವುದೆಮ್ಮ ಬಿಗಿಯಲು ಮೋಹವು !
ತನ್ನ ಜಯಿಸಿದ ಶಕ್ತನು – ಅವ
ನೆಲ್ಲ ಜಯಿಸಿದ ಮುಕ್ತನು ;
ಎಂಬುದನು ತಿಳಿ ; ಹಿಂಜರಿಯದಿರು, ಸಂನ್ಯಾಸಿಯೇ, ನಡೆ ಮುಂದಕೆ
ಗುರಿಯು ದೊರಕುವವರೆಗೆ ನಡೆ, ನಡೆ ; ನೋಡದಿರು ನೀ ಹಿಂದಕೆ
ಏಳು ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು ;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು !
ಹಾಡು ಸಿದ್ಧನೆ, ಓ ಪ್ರಬುದ್ಧನೆ, ಹಾಡು ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 3 ||
“ಬೆಳೆಯ ಕೊಯ್ವನು ಬಿತ್ತಿದಾತನು, ಪಾಪ ಪಾಪಕೆ ಕಾರಣ.
ವೃಕ್ಷ ಕಾರ್ಯಕೆ ಬೀಜಕಾರಣ, ಪುಣ್ಯ ಪುಣ್ಯಕೆ ಕಾರಣ.
ಹುಟ್ಟಿ ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು ;
ಕಟ್ಟು ಮೀರಿಹನಾವನಿರುವನು ? ಕಟ್ಟು ಕಟ್ಟನು ಹೆರುವುದು !”
ಎಂದು ಪಂಡಿತರೆಂಬರು ; – ಮೇಣ್
ತತ್ತ್ವದರ್ಶಿಗಳೆಂಬರು !
ಆದೊಡೇನಂತಾತ್ಮವೆಂಬುದು ನಾಮರೂಪಾತೀತವು ;
ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು
ತತ್ತ್ವಮಸಿ ಎಂದರಿತು, ಸಾಧುವೆ, ಹಾಡು ಚಾಗಿಯ ಹಾಡನು !
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು !
ಸಾರು ಸಿದ್ಧನೆ, ವಿಶ್ವವರಿಯಲಿ ! ಹಾಡು ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 4 ||
ತಂದೆ ತಾಯಿಯು ಸತಿಯು ಮಕ್ಕಳು ಗೆಳೆಯರೆಂಬುವರರಿಯರು ;
ಕನಸು ಕಾಣುತಲವರು ಸೊನ್ನೆಯೆ ಸರ್ವವೆನ್ನುತ ಮೆರೆವರು
ಲಿಂಗವರಿಯದ ಆತ್ಮವಾರಿಗೆ ಮಗುವು ? ಯಾರಿಗೆ ತಾತನು ?
ಯಾರ ಮಿತ್ರನು ? ಯಾರ ಶತ್ರುವು ? ಒಂದೆಯಾಗಿರುವಾತನು !
ಆತ್ಮವೆಲ್ಲಿಯು ಇರುವುದು ; – ಮೇಣ್
ಆತ್ಮವೊಂದಾಗಿರುವುದು.
ಭೇದವೆಂಬುವ ತೋರಿಕೆಯು ನಮ್ಮಾತ್ಮನಾಶಕೆ ಹೇತುವು
ಭೇದವನು ತೊರೆದೊಂದೆಯೆಂಬುದನರಿಯೆ ಮುಕ್ತಿಗೆ ಸೇತುವು
ಧೈರ್ಯದಿಂದಿದನೆಲ್ಲರಾಲಿಸೆ ಹಾಡು ಚಾಗಿಯ ಹಾಡನು !
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು !
ಸಾರು ಜೀವನ್ಮುಕ್ತ ! ಸಾರೈ ಧೀರ ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 5 ||
ಇರುವುದೊಂದೇ ! ನಿತ್ಯ ಮುಕ್ತನು, ಸರ್ವಜ್ಞಾನಿಯು ಆತ್ಮನು !
ನಾಮರೂಪಾತೀತನಾತನು ; ಪಾಪಪುಣ್ಯಾತೀತನು !
ವಿಶ್ವಮಾಯಾಧೀಶನಾತನು ; ಕನಸು ಕಾಣುವನಾತನು !
ಸಾಕ್ಷಿಯಾತನು : ಪ್ರಕೃತಿ ಜೀವರ ತೆರದಿ ತೋರುವನಾತನು !
ಎಲ್ಲಿ ಮುಕ್ತಿಯ ಹುಡುಕುವೆ ? – ಏ
ಕಿಂತು ಸುಮ್ಮನೆ ದುಡುಕುವೆ ?
ಇಹವು ತೋರದು, ಪರವು ತೋರದು : ಗುಡಿಯೊಳದು ಮೈದೋರದು
ವೇದ ತೋರದು, ಶಾಸ್ತ್ರ ತೋರದು : ಮತವು ಮುಕ್ತಿಯ ತೋರದು !
ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮಪಾಶವು ;
ಬರಿದೆ ಶೋಕಿಪುದೇಕೆ ? ಬಿಡು, ಬಿಡು ! ನಿನಗೆ ನೀನೇ ಮೋಸವು !
ಬೇಡ, ಪಾಶವ ಕಡಿದು ಕೈಬಿಡು ! ಹಾಡು ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 6 ||
ಶಾಂತಿ ಸರ್ವರಿಗಿರಲಿ ಎಂದೊರೆ, “ಜೀವಜಂತುಗಳಾಳಿಗೆ”
ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ
ಬಾನೊಳಾಡುವ, ನೆಲದೊಳೋಡುವ ಸರ್ವರಾತ್ಮನು ನಾನಹೆ ;
ನಾಕನರಕಗಳಾಸೆ ಭಯಗಳನೆಲ್ಲ ಮನದಿಂ ದೂಡುವೆ !”
ದೇಹ ಬಾಳಲಿ, ಬೀಳಲಿ :- ಅದು
ಕರ್ಮನದಿಯಲಿ ತೇಲಲಿ !
ಕೆಲರು ಹಾರಗಳಿಂದ ಸಿಂಗರಿಸದನು ಪೂಜಿಸಿ ಬಾಗಲಿ !
ಕೆಲರು ಕಾಲಿಂದೊದೆದು ನೂಕಲಿ ! ಹುಡಿಯು ಹುಡಿಯೊಳೆ ಹೋಗಲಿ :
ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು ?
ನಿಂದೆ ನಿಂದಿಪರೆಲ್ಲ ಕೂಡಲು, ಯಾರು ನಿಂದೆಯನುಂಬರು ?
ಪಾಶಗಳ ಕಡಿ ! ಬಿಸುಡು ಕಿತ್ತಡಿ ! ಹಾಡು ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 7 ||
ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೊ,
ಸತ್ಯವೆಂಬುವುದಲ್ಲಿ ಸುಳಿಯದು ! ಎಲ್ಲಿ ಕಾಮವು ಇರುವುದೊ,
ಅಲ್ಲಿ ಮುಕ್ತಿಯು ನಾಚಿ ತೋರದು ! ಎಲ್ಲಿ ಸುಳಿವುದೋ ಭೋಗವು
ಅಲ್ಲಿ ತೆರೆಯದು ಮಾಯೆ ಬಾಗಿಲನಲ್ಲಿಹುದು ಭವರೋಗವು !
ಎಲ್ಲಿ ನೆಲಸದೋ ಚಾಗವು, – ದಿಟ
ವಲ್ಲಿ ಸೇರದು ಯೋಗವು !
ಗಗನವೇ ಮನೆ ! ಹಸುರೆ ಹಾಸಿಗೆ ! ಮನೆಯು ಸಾಲ್ವುದೆ ಚಾಗಿಗೆ ?
ಹಸಿಯೋ ? ಬಿಸಿಯೋ ? ಬಿದಿಯು ಕೊಟ್ಟಾಹಾರವನ್ನವು ಯೋಗಿಗೆ
ಏನು ತಿಂದರೆ ಏನು ಕುಡಿದರೆ ಏನು ? ಆತ್ಮಗೆ ಕೊರತೆಯೇ ?
ಸರ್ವ ಪಾಪವ ತಿಂದು ತೇಗುವ ಗಂಗೆಗೇಂ ಕೊಳೆ ಕೊರತೆಯೇ ?
ನೀನು ಮಿಂಚೈ ! ನೀನು ಸಿಡಿಲೈ ! ಮೊಳಗು ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 8 ||
ನಿಜವನರಿತವರೆಲ್ಲೋ ಕೆಲವರು ; ನಗುವರುಳಿದವರೆಲ್ಲರೂ
ನಿನ್ನ ಕಂಡರೆ, ಹೇ ಮಹಾತ್ಮನೆ ! ಕುರುಡರೇನನು ಬಲ್ಲರು ?
ಗಣಿಸದವರನು ಹೋಗು, ಮುಕ್ತನೆ, ನೀನು ಊರಿಂದೂರಿಗೆ
ಸೊಗವ ಬಯಸದೆ ಅಳಲಿಗಳುಕದೆ ! ಕತ್ತಲಲಿ ಸಂಚಾರಿಗೆ
ನಿನ್ನ ಬೆಳಕನು ನೀಡೆಲೈ ; – ಸಂ
ಸಾರ ಮಾಯೆಯ ದೂಡೆಲೈ ;
ಇಂತು ದಿನದಿನ ಕರ್ಮಶಕ್ತಿಯು ಮುಗಿವವರೆಗೂ ಸಾಗೆಲೈ !
ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ !
ಏಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು !
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು !
ತತ್ತ್ವಮಸಿ ಎಂದರಿತು ಹಾಡೈ, ಧೀರ ಸಂನ್ಯಾಸಿ – ಓಂ !
ತತ್ ! ಸತ್ ! ಓಂ ! || 9 ||