ಏಕಾತ್ಮ ಭಾರತದ ಶತಕೋಟಿ ಕಾಯಗಳ

ಏಕಾತ್ಮ ಭಾರತದ ಶತಕೋಟಿ ಕಾಯಗಳ
ಧಮನಿಯೊಳು ಉಕ್ಕುತಿಹ ನೆತ್ತರೊಂದೇ |
ಹೃದಯದೊಳು ಸ್ಪಂದಿಸುವ ಭಾವ ಒಂದೇ ||
ಹಿಂದುತ್ವವೀ ನೆಲದ ಮೂಲಮಂತ್ರ ..
ಈ ಪುಣ್ಯಭೂಮಿಗದೇ ಜೀವಯಂತ್ರ             || ಪ ||

ನಮ್ಮ ಪ್ರಾಚೀನತೆಯ ಶ್ರೇಷ್ಠತಮ ಸಂಸ್ಕೃತಿಯ
ರವಿಕಿರಣ ವಿಶ್ವವನೆ ಬೆಳಗುತಿಹುದು
ವಿವಿಧತೆಯೊಳೇಕತೆಯ ಸಮರಸದ ಸಂಹಿತೆಯ
ಆದರ್ಶ ಜನಮನವ ಬೆಸೆಯುತಿಹುದು          || 1 ||

ಸುವಿಚಾರ ಬದ್ಧತೆಗೆ ಆಚಾರ ಶುದ್ಧತೆಗೆ
ಭಾರತದೊಳಿಹುದೆಂದೂ ಅಗ್ರ ಪ್ರಾಶಸ್ತ್ಯ
ಹೊಸಯುಗದ ಹೊಸಜಗದ ನಿರ್ಮಿತಿಯ ಸಿದ್ಧತೆಗೆ
ಮೀಸಲಾಗಿರಲೆಮ್ಮ ಪೂರ್ಣ ಸಾಮರ್ಥ್ಯ        || 2 ||

ಚರಿತೆಗಂಟಿದ ಸಕಲ ದುರಿತಗಳ ಕಶ್ಮಲವ
ಒಮ್ಮನದಿ ನಾವಿಂದು ನೀಗಿಸೋಣ
ತರತಮದ ಭೇದಗಳ ತ್ವರಿತವಾಗಳಿಸುತಲಿ
ಜಾಗೃತಿಯ ಕಹಳೆಯನು ಮೊಳಗಿಸೋಣ       || 3 ||

Leave a Reply

Your email address will not be published. Required fields are marked *