ಎಚ್ಚರಗೊಳ್ಳಿ ಎಚ್ಚರಗೊಳ್ಳಿ ಕೆಚ್ಚೆದೆಯ ಸಿಂಹಗಳೇ |
ಎಚ್ಚರಗೊಳ್ಳಿ ಎಚ್ಚರಗೊಳ್ಳಿ ದಿಗ್ವಿಜಯದ ವ್ರತಧಾರಿಗಳೇ || ಪ ||
ಮುಚ್ಚಿದೆಯೈ ಶತಮಾನಗಳಿಂದ ಗರ್ಜನೆಗೈಯುವ ವದನ
ಹೆಚ್ಚಿದೆ ಕೇಸರಿಗಳ ಸಾಮ್ರಾಜ್ಯದಿ ಅರಿಗಳ ನರಿಗಳ ಚಲನ
ಕಿಚ್ಚಿಕ್ಕಲು ಕಾನನ ಸಂಪತ್ತಿಗೆ ಕಾದಿದೆ ಶತ್ರು ಸಮೂಹ
ಅಚ್ಚರಿ ಇದು ವನರಾಜನಿಗೀಪರಿ ಮೈಮರೆವಿನ ವ್ಯಾಮೋಹ || 1 ||
ಕವಿದಿರೆ ಗವಿಯೊಳು ಭೀಕರ ಕತ್ತಲು ಬೆಳಕಿಗದೆಲ್ಲಿದೆ ಸ್ಥಾನ?
ರವಿಕಿರಣದ ನಿರ್ಗಮನವು ಸಾರಿದೆ ಭಾಸ್ಕರಗೆ ಅಪಮಾನ
ಆವರಿಸಿತೆ ಆರ್ಭಟದಾಸ್ಥಾನದಿ ಭಯ ಅಂಜಿಕೆ ಬರಿಮೌನ?
ಸಾವನೆ ಸಾಯಿಸಿ ಅರಳಿದ ಕಾಯವು ಆಯಿತೆ ಪೌರುಷಹೀನ? || 2 ||
ಗಹಗಹಿಸಲಿ ಗಿರಿಗಹ್ವರ ಗುಹೆಗಳು ಬಾಯ್ದೆರೆಯಲಿ ಅನಲಾದ್ರಿ
ಭೋರ್ಗರೆಯಲಿ ಲಾವರಸಧಾರೆಯು ಸಿಡಿದೇಳಲಿ ಹೈಮಾದ್ರಿ
ಮೈ ಕೊಡಹಲಿ ಸಾಹಸ ಸಾಮ್ರಾಟರು ಮಾರ್ದನಿಸಲಿ ಗರ್ಜನೆಯು
ಪ್ರಲಯೇಶ್ವರನಾರಾಧನೆಗಿಂದು ನಡೆಯಲಿ ರುಧಿರಾರ್ಚನೆಯು || 3 ||