ಏ ಹಿಂದು ವೀರಾ ! ಭಿನ್ನ ಭಾವ ಬಿಟ್ಟು ಬಾರಯ್ಯ
ನೀ ಭಾರತಾಂಬೆ ಸೇವೆಗಾಗಿ ಕೂಡಿ ಸೇರಯ್ಯ || ಪ ||
ಹಿಂದುಜನತೆ ಸಂಘಟನೆಯೊಳಿರುವುದು ಶಕ್ತಿ
ಆ ಶಕ್ತಿಯಿಂದ ಲಭಿಸುವುದು ಬಂಧವಿಮುಕ್ತಿ
ಆ ಶಕ್ತಿಗಾಗಿ ಹಗಲಿರುಳು ದುಡಿಯಬೇಕಯ್ಯ
ನೀ ಅದಕೆ ಸಂಘಕಿಂದು ಬಂದು ಸೇರಬೇಕಯ್ಯ || 1 ||
ಹಕ್ಕ ಬುಕ್ಕ ವೀರರಿಂದ ಸ್ಫೂರ್ತಿಯ ಗಳಿಸಿ
ಪ್ರತಾಪ ಪೃಥ್ವಿರಾಜರಿಂದ ಧೈರ್ಯವ ಗಳಿಸಿ
ನೀ ಛತ್ರಸಾಲ ಶಿವರ ಕೀರ್ತಿ ಉಳಿಸಬೇಕಯ್ಯ
ಸ್ವಾತಂತ್ರ್ಯ ಸಮರ ಸ್ಮರಣೆಯ ನೀ ಮಾಡಬೇಕಯ್ಯ || 2 ||
ಶ್ರೀ ರಾಮಕೃಷ್ಣರಂದು ದುಡಿದ ಧರ್ಮಕೆ ದುಡಿದು
ಶ್ರೀ ವಿದ್ಯಾರಣ್ಯ ಸ್ವಾಮಿ ರಾಮದಾಸರ ನೆನೆದು
ನೀನವರು ದುಡಿದ ಧರ್ಮಕಿಂದು ದುಡಿಯಬೇಕಯ್ಯ
ಆ ಧರ್ಮದಿಂದ ಲೋಕವ ನೀ ಬೆಳಗಬೇಕಯ್ಯ || 3 ||
ಪರಮಪೂಜ್ಯ ಕೇಶವರು ಅಂದು ದುಡಿದರು
ಸ್ವಾತಂತ್ರ್ಯದೇವಿ ಸೇವೆಗೈದು ಸ್ವರ್ಗ ಸೇರ್ದರು
ನಿನಗವರೇ ಆದರ್ಶವಯ್ಯ ಮರೆಯದಿರಯ್ಯ
ನೀ ಭಾರತಾಂಬೆ ಮುಕ್ತಿಗಾಗಿ ಕೂಡಿ ಸೇರಯ್ಯ || 4 ||