ಧ್ಯೇಯಧಾರೀ ಸಾಗು ಸಂತತ ತ್ಯಾಗ ಸೇವಾ ಕಾರ್ಯಪಥದಿ || ಪ ||
ವ್ಯಕ್ತಿಗತ ಯಶ ಸೌಖ್ಯ ಶ್ರೇಷ್ಠತೆ ಪಡೆವ ಬಹು ಮನದಾಸೆ ತೊರೆದು
ಭಕ್ತಿ ಭಾವನೆ ತುಂಬಿ ಮನದಲಿ ರಾಷ್ಟ್ರಪುರುಷನ ಮೂರ್ತಿ ಕೊರೆದು
ಸೂಕ್ತ ಸಾದರ ಗಂಧ ಕೃತಿಸುಮ ಶೀಲ ಕತ್ತುರಿ ಪಾದ ಕೆರೆದು
ಶಕ್ತಿ ದೀಪವನುರಿಸಿ ಹೃದಯದ ನಿಷ್ಠೆ ಪ್ರಭೆಯಾರತಿಯ ಗೈದು
ಮೌಕ್ತಿಕದ ಸರ ಸೇವೆ ಸಲಿಸುತ ಪೂಜಿಸುತ ನಡೆ ಧ್ಯೇಯಪಥದಿ || 1 ||
ವೈರಭಾವನೆ ಮನದಿ ಸುಳಿಯದೆ ಸ್ವಾಭಿಮಾನವ ತುಂಬಿ ಉರದಿ
ಅರ ಬಹುವಿಧ ದುಷ್ಟ ಶಕ್ತಿಗು ಬೆದರಿ ಬಾಗದೆ ನಡೆದು ಪಥದಿ
ಬೀರಿ ಚಿರ ಸುಖ ಮೂಲೆಗು ಸೃಜಿಸಿ ಶೀಲವ ಜನರ ಮನದಿ
ದಾರಿ ತೋರಿಸಿ ಜಗವ ಪೊರೆವಾಕಾಂಕ್ಷೆ ತುಂಬುತ ಸಾಗು ಭರದಿ
ಭಾರೀ ಭಾರೀ ರಾಜ್ಯ ಬಾಗುವ ಪರಮ ಮನುಜತೆ ಬೀರಿ ಜಗದಿ || 2 ||
ಒಡೆದು ಚದುರಿದ ನೊಂದ ಜನರಲಿ ಮನದಿ ನೆಲಸಿಹ ಕಲುಷ ಕಳೆದು
ದೃಢ ಸದೈಕ್ಯದಿ ದೇಶದೇಳ್ಗೆಯ ಕಾರ್ಯಪಥದಲ್ಲವರನೆಳೆದು
ಎಡರಿನಲಿ ಮುನ್ನಡೆಯೆ ಬಾಳ್ಸಿರಿ ಧೈರ್ಯ ಶೌರ್ಯದ ಮಂತ್ರ ತಿಳಿದು
ಪಡೆದ ಮನದಭಿಮಾನ ಸತ್ಯದ ಮಾರ್ಗದರ್ಶನ ನಿತ್ಯವಿಹುದು
ಸಡಗರದಿ ಕಾದಿಹಳು ಜಯಸಿರಿ ನಂಬಿ ಧಾವಿಸು ವಿಜಯ ಪಥದಿ || 3 ||