ಧರ್ಮ ಸಮಾಜ ಸಂಸ್ಕೃತಿ ಎಲ್ಲವು ಬೆಳೆದುದೆ ಮೊದಲಿಲ್ಲಿ
ಹಿಂದುಸ್ಥಾನದಲಿ ಈ ತಾಯಿಯ ಮಡಿಲಲ್ಲಿ || ಪ ||
ಜಗತಿನ ಜನರು ತೊಳಲಿರೆ ತಿಮಿರಾಂಧಕಾರದಲಿ
ಮೊಳಗಿತು ನಾಲ್ಕು ವೇದಗಳಂದು ಹಿಂದುಸ್ಥಾನದಲಿ
ಜ್ಞಾನ ವಿಜ್ಞಾನ ತಂತ್ರಜ್ಞಾನ ಮೊದಲಿಲ್ಲಿ
ಋಷಿಮುನಿಗಳ ವನದಲ್ಲಿ ಆ ತಪಸ್ಸಿನ ರೂಪದಲಿ || 1 ||
ಬೇಡವೃತ್ತಿಯ ರತ್ನಾಕರನು ವಾಲ್ಮೀಕಿ ಆದನಿಲ್ಲಿ
ಕುರುಬರ ಕನಕನು ಕೃಷ್ಣದರ್ಶನ ಪಡೆದನು ಉಡುಪಿಯಲಿ
ಮತ್ಸ್ಯಕನ್ನಿಕೆಯ ಪುತ್ರವ್ಯಾಸನು ಬರೆದನು ವೇದವಿಲ್ಲಿ
ಈ ವೇದದ ಭೂಮಿಯಲಿ ಈ ಜ್ಞಾನದ ಬೀಡಿನಲಿ || 2 ||
ಗೌತಮ ಬುದ್ಧ ಶಾಂತಿಮಂತ್ರವ ನೀಡಿದ ಜಗಕಿಲ್ಲಿ
ನಾನೇ ಬ್ರಹ್ಮ ಎನ್ನುತ ಶಂಕರ ಬೆಳಗಿದ ತಾನಿಲ್ಲಿ
ಬ್ರಹ್ಮ ಜೀವರು ಬೇರೆ ಎಂದನು ಮಧ್ವನು ದೇಶದಲಿ
ನಾಸ್ತಿಕ ಆಸ್ತಿಕರೆಲ್ಲರು ಮೆರೆದಿಹ ಹೆಮ್ಮೆಯ ನಾಡಿನಲಿ || 3 ||