ಧರ್ಮದೇವತೆ ವಿಶ್ವವಂದಿತೆ ಮಾತೆ ಹೇ ಮಹಿಮಾನ್ವಿತೆ
ಚರಣತಲದಲಿ ಜಲಧಿಸೇವಿತೆ ಓ ಹಿಮಾಲಯ ಶೋಭಿತೆ || ಪ ||
ಸಸ್ಯ ಶ್ಯಾಮಲ ಸುಜಲಕೋಮಲ ರೂಪು ತ್ಯಜಿಸುತೆ ಕೆರಳುತೆ
ಏಳು ಭಾರತಿ ಸ್ವೀಕರಿಸಿದೋ ವೈರಿಪ್ರಾಣಗಳಾಹುತಿ
ಪೂರ್ವ ಪಶ್ಚಿಮ ದಕ್ಷಿಣೋತ್ತರದತಿ ಪುನೀತ ರಜಾಂಕಿತೆ
ದಿವಿಜ ಪೂಜಿತೆ ದುರುಳ ದಮನಕೆ ಏಳು ದುರ್ಗಾದೇವತೆ || 1 ||
ದಿಗ್ವಿಜಯಾನಂದ ಕಾರ್ಯಕೆ ಸ್ಥೈರ್ಯ ಸ್ಫೂರ್ತಿಯ ಕರುಣಿಸಿ
ಧೈರ್ಯ ಸಾಹಸವೆರೆದು ಹೃದಯದಿ ದಿವ್ಯ ಭಾವವನರಳಿಸಿ
ಸಂಸ್ಕೃತಿಯ ಸೌರಭದ ಮೃದುಸುಮಕಗ್ನಿಕಾಂತಿಯ ಲೇಪಿಸಿ
ಏಳು ಓ ಸಿಡಿದೇಳು ನಮ್ಮೊಳು ಸ್ವಾಭಿಮಾನವ ಬೆಳಗಿಸಿ || 2 ||
ರಾಮ ಭರತರ ಬಂಧು ಭಾವವ ಬೆಳೆಸಿ ನಿನ್ನಯ ಸುತರಲಿ
ಪಾರ್ಥ ಕೃಷ್ಣರ ನೇಹ ಸ್ನೇಹವ ಹರಿಸುತೀ ಜನರೆದೆಯಲಿ
ಭಕ್ತಿಯಾದ್ರತೆ ಶಕ್ತಿಸಾಂದ್ರತೆ ಇತ್ತು ಪ್ರಗತಿಯ ಪಥದಲಿ
ನಡೆಸು ತಾಯಿಯೇ ನಗಿಸು ನಾಡನು ನುಡಿಸು ನಿನ್ನದೆ ಹಾಡನು || 3 ||