ದೇಶದುನ್ನತಿ ಅಲ್ಲಿ ನೆಲೆಸುವ
ಜನರ ಶ್ರದ್ಧೆಯ ಬಯಸಿದೆ
ದೇಶಸೇವೆಯೆ ಈಶ ಸೇವೆಯು
ಎನುವ ಮನಗಳ ಕರೆದಿದೆ || ಪ ||
ಹುಲ್ಲು ಬೇರದು ನೀರು ನಿಲುಕಿದ-
ರಲ್ಲೆ ಭುವಿಯಲಿ ಬೆಳೆವುದು
ಹಸಿರ ಸೂಸುತ ತನ್ನಲಡಗಿಹ
ಕಸುವ ಕಾಣಿರೋ ಎನುವುದು || 1 ||
ಬದುಕು ಸಾಗಿಸಲೊಂದು ದಾರಿಯು
ದೊರೆವುದತಿ ಅನಿವಾರ್ಯವು
ಕೆದುಕೆ ಬೂದಿಯ ಬುದ್ಧಿ ಅಗ್ನಿಯು
ಉರಿದು ಬೆಳಗಲಿ ಧ್ಯೇಯವು || 2 ||
ಯುಕ್ತರಲಿ ಉಂಟೆಂದು ಬುದ್ಧಿಯು
ಬುದ್ಧಿಯಿಂದಲೆ ಭಾವನೆ
ಸೂಕ್ತ ರೀತಿಯ ಬಾಳ ಹಾದಿಯು
ಶುದ್ಧ ನಿಷ್ಠೆಯ ಸಾಧನೆ || 3 ||
ಶೀಲ ಜ್ಞಾನ ಏಕತೆಗಳೇ
ಬೆಳೆವ ಮಂಗಳ ಮೆಟ್ಟಿಲೈ
ಕಾಲ ಕಳೆವುದು ಬಾಳು ಮುಗಿವುದು
ಉಳಿವುದೊಂದೇ ಕೀರ್ತಿಯೈ || 4 ||
ಧ್ಯೇಯನಿರತರೆ ಶುಭವ ನೀಡಿರಿ
ಶ್ರದ್ಧೆ ಸಾಹಸಸಿಂಹರೇ
ಜಯವು ಲಭಿಸಲಿ ಕೂಡಿ ದುಡಿಯಿರಿ
ಇದೋ ಇಲ್ಲಿದೆ ನಲ್ಗರೆ || 5 ||