ಚಿನ್ನದ ನಾಡಿನ ಚಿಣ್ಣರು ನಾವು
ಸನ್ನಡತೆಯ ಸುಕುಮಾರರು ನಾವ್ |
ಸೇವೆಯ ದೀಕ್ಷೆಯ ತೊಟ್ಟಿಹೆವು, ಹೊಸನಾಡೊಂದನು ಕಟ್ಟುವೆವು || || ಪ ||
ಧ್ರುವ ನಚಿಕೇತ ಲವಕುಶ ಭರತ
ನಮ್ಮ ಪರಂಪರೆ ಸಾಹಸಭರಿತ
ಪುಟ್ಟ ಶಾಮನೊಲು ದಿಟ್ಟತನದಲಿ ದುಷ್ಟರ ಶಿರವನು ಮೆಟ್ಟುವೆವು || 1 ||
ಭಾಷೆಯು ನೂರು ಭಾವನೆಯೊಂದೇ
ಹರಿಯುವ ನೆತ್ತರ ಬಣ್ಣವದೊಂದೇ
ಭಾರತಮಾತೆಯ ಮಕ್ಕಳು ನಾವು, ಭೇದಗಳನು ಪುಡಿಗಟ್ಟುವೆವು || 2 ||
ಪರಹಿತಕಾಗಿ ಮುಡಿಪೀ ಬದುಕು
ಎಲ್ಲೆಡೆ ಮೂಡಿಸಿ ಜ್ಞಾನದ ಬೆಳಕು
ನಿದ್ರಿತ ಜನತೆಯನೆಚ್ಚರಿಸುವೆವು, ಬಿದ್ದವರನು ಮೇಲೆತ್ತುವೆವು || 3 ||
ನಮ್ಮ ನಾಡಿನ ಏಕತೆಯನ್ನು
ಭಾರತದ ರಾಷ್ಟ್ರೀಯತೆಯನ್ನು
ಧ್ವಂಸಗೊಳಿಸಲು ಕಾದಿಹ ರಿಪುಗಳ ವಂಶವ ಯಮಪುರಿಗಟ್ಟುವೆವು || 4 ||
ಹೊರದೇಶದ ವ್ಯಾಮೋಹವು ಬೇಡ
ಕಳಚಿರಿ ಅನುಕರಣೆಯ ಮುಖವಾಡ
ಸ್ವದೇಶನಿಷ್ಠೆಯ ವ್ರತವನು ಪಾಲಿಸಿ ಭರದಲಿ ಗುರಿಯನು ಮುಟ್ಟುವೆವು || 5 ||