ಭಾರತೀಯರು ನಾವು ಹಿಂದು ವೀರರು
ಸಾಹಸದ ಸೈನಿಕರು ಭಾರತಾಂಬೆಯಾ ಸುತರು || ಪ ||
ದಿಕ್ಕು ತೋಚದ ಕಡೆಗೆ ನಡೆವವರು ನಾವಲ್ಲ
ದಿಕ್ಕನ್ನೆ ಬದಲಿಸುವ ಕೆಚ್ಚೆದೆಯ ಸಿಂಹಗಳು
ಸಾಗರದ ಅಲೆ ಅಲೆಯ ಹಿಮ್ಮೆಟ್ಟಿಸುವ ಛಲದ
ಕಂಟಕದ ಮೇರುವನೆ ಕಿತ್ತು ಬಿಸುಡುವ ಬಲದ || 1 ||
ಅಡಿಗಡಿಗೆ ಎದುರಾದ ವಿಘ್ನಗಳಿಗೆದೆಯೊಡ್ಡಿ
ದೃಢತೆಯಿಂ ನಿರ್ಮೂಲಗೈದ ಕಲಿಗಳು ನಾವು
ಶೂನ್ಯದೊಳು ಸಾಹಸದ ಇತಿಹಾಸ ಸೃಜಿಸುತಿಹ
ಮಸಣದಲೂ ನಂದನದ ನವಸೃಷ್ಟಿ ರಚಿಸುವೆವು || 2 ||
ಭಾರತದ ಅಡಿಗಲ್ಲ ನಡುಗಿಸಿರೆ ಛಿದ್ರತೆಯು
ಭಾರತಿಯ ಕಂದರೊಳು ಸುಳಿಯುತಿದೆ ಕ್ಷುದ್ರತೆಯು
ಐಕ್ಯತೆಯ ಘೋಷವನು ನಾಡಗಲ ಮೊಳಗಿಸುತ
ಸಮರಸದ ಜ್ಯೋತಿಯನು ಜನಮನದಿ ಬೆಳಗಿಸಿಹ || 3 ||