ಭರತಮಾತೆಯ ಮಮತೆಯುಡುಗೊರೆ ಯೋಗವೆಂಬೀ ವಿಸ್ಮಯ
ಅರಿತು ಜಗವು ಅಪ್ಪಿಕೊಂಡಿದೆ ಫಲವು ಅದ್ಭುತ ಅಕ್ಷಯ || ಪ ||
ಇರದು ಇತಿಮಿತಿ ಗುರು ಪತಂಜಲಿ ತೋರಿಕೊಟ್ಟರು ಹಾದಿಯ
ಭರದಿ ಕಾಡಿಗೆ ಜನತೆಯೆಲ್ಲೆಡೆ ವಿಶ್ವ ಯೋಗದ ಸುದಿನವ || ಅ.ಪ ||
ಬರಿಯ ತನುವನು ಮಣಿಪ ಪರಿಣಿತಿ ಅಷ್ಟೆ ಅಲ್ಲವು ಯೋಗವು
ಹರಹು ಶರಧಿಯು ಮುಗಿಲ ಪರಿಧಿ ಉತ್ತುಂಗ ಮೇರು ಶಿಖರವು
ಉಸಿರು ಉಸಿರಲಿ ಬಸಿರಿನಲ್ಲೂ ಜೀವ ಚೇತನ ವೃದ್ಧಿಯು
ನೂರು ಜಂಜಡ ದೇಹಕೆಲ್ಲ ಇಂದು ಬೇಕಿದೆ ಧ್ಯಾನವು || 1 ||
ಮನವ ಮಥಿಸುತ ಕಾಯ ಶುದ್ಧಿಯ ಮಾಡುವಂತಹ ಯಾಗವು
ಅಣುವಿನಲ್ಲಿಯು ಪ್ರಾಣ ಸೆಲೆಯನು ಕಾಣುವಂತಹ ದೃಷ್ಟಿಯು
ಮನುಜರೊಳಗಿನ ಹೃದಯ ಬೆಸೆಯುತ ಹಾಡುವಂತಹ ರಾಗವು
ನೋವನಳಿಸುತ ನಗುವ ಅರಳಿಪ ದಿವ್ಯಶಕ್ತಿಯ ಯೋಗವು || 2 ||
ಭೇದಭಾವದ ತೆರೆಯು ಕಳಚಿರೆ ಸ್ನೇಹದ ಸವಿಬಂಧನ
ಅಂತರಾತ್ಮದ ಇರುವನರಿತರೆ ನಿತ್ಯ ಸತ್ಯದ ಚಿಂತನ
ಸಾಮರಸ್ಯದ ಐಕ್ಯಮಂತ್ರಕೆ ಯೋಗವೊಂದೇ ಸಾಧನ
ಭೂಮಿ ವ್ಯೋಮದ ಯೋಗ ವ್ಯಾಪಿಸಿ ಧನ್ಯವಾಗಲಿ ಜೀವನ || 3 ||