ಭರತ ದೇಶದಿ ಮರಳಿ ನಡೆಯಲಿ ಶೌರ್ಯ ಸಾಹಸದರ್ಚನೆ
ಹೆಮ್ಮೆ ಸಾರುತ ಚಿಮ್ಮಿ ಹೊಮ್ಮಲಿ ಸಿಂಹ ವಿಕ್ರಮ ಘರ್ಜನೆ || ಪ ||
ಪರಮ ಪುರುಷನ ರಾಮಚಂದ್ರನ ಸೂರ್ಯಕುಲ ಸಂತಾನರೆ
ಶುದ್ಧರಕ್ತದ ಕ್ಷಾತ್ರತೇಜದ ಧೀರ ಪೌರುಷವಂತರೆ
ಶೂರವೀರನು ಪೌರವಾರ್ಯನು ಶಕ್ತಿಬಿತ್ತಿಹ ನೆಲವಿದು
ಪುರುಷಸಿಂಹನು ಪೃಥ್ವಿರಾಜನು ನೆತ್ತರಿತ್ತಿಹ ನಾಡಿದು || 1 ||
ಮಾನಕಾಗಿಯೇ ಬಾಳಿ ಬದುಕಿದ ಜಾತಿವಂತರ ತೌರಿದು
ಮಾತಿಗಾಗಿಯೆ ಬಲಿಯ ನೀಡಿದ ನೀತಿವಂತರ ನೆಲೆಯಿದು
ತುಂಡು ಭೂಮಿಗೆ ಕೋಡಿ ನೆತ್ತರ ಹರಿಸಿದೊಡೆಯರ ಬೀಡಿದು
ಮಣ್ಣಿಗಾಗಿಯೆ ಮಣ್ಣುಗೂಡಿದ ತ್ಯಾಗಿ ಮಕ್ಕಳ ಮನೆಯಿದು || 2 ||
ಧವಸ ಧಾನ್ಯದಿ ನೀರು ನೆಲದಲಿ ಕೆಚ್ಚಿನಚ್ಚರಿ ತುಂಬಿದೆ
ದೇಶವಿದರೊಳು ಗಾಳಿ ಬೆಳಕೊಳು ಸಚ್ಚರಿತೆ ಬೇರೂರಿದೆ
ಇಲ್ಲಿ ಜನಿಸಿದ ಹುಲ್ಲೆ ಹಸುಗಳು ಹುಲಿಯ ಹೆದರಿಸಬಲ್ಲವು
ಜನರನೆದುರಿಸೆ ಬೆದರದಿರುವುದೆ ತುಂಬಿದೇ ಜಗವೆಲ್ಲವು || 3 ||
ಒಂದೇ ಮಾತೆಯ ಹಿಂದು ಮಕ್ಕಳು ಬಂಧು ಭಾವವ ಹೊಂದಿರೆ
ದಾಸ್ಯದೊಡಲೊಳು ಮೇಲಕೆದ್ದಿರಲರುಣಕಾಂತಿಯ ಹೊಂದಿರೆ
ಏಳಿರೇಳಿರಿ ಸಹಜ ರೂಪದ ಶೌರ್ಯದುರಿ ಮೈ ತಾಳಿರಿ
ವಿಶ್ವದೊಡೆಯರದಾರು ಎನ್ನುವ ಪ್ರಶ್ನೆಗುತ್ತರ ಹೇಳಿರಿ || 4 ||