ಭಾರತ ದೇಶದ ಉನ್ನತಿ ಶೌರ್ಯದಿ
ಹಿಂದುಗಳೇ ಹಿಂದಾಗುವಿರೆ ?
ಬರುವುದು ಕೇಸರಿಯುದರದಿ ಕೇಸರಿ
ಎಂಬುದು ಮಾತೆಗೆ ತೋರುವಿರೆ ? || ಪ ||
ಗಗನವ ಚುಂಬಿಪ ಗಿರಿಗಳನಲುಗಿಸಿ
ಸಾಗರದಲಿ ಸೇತುವೆ ಬಿಗಿದು
ಸಾಗಿಸಿದಿರಿ ರಾಘವನನು ಲಂಕೆಗೆ
ಅಗಣಿತ ಸಾಹಸವನು ಗೈದು
ಕಡಲನು ಜಿಗಿದಾ ಹನುಮನ ಶಕ್ತಿ
ಪರಾಕ್ರಮವಿಂದಿಗೆ ಉಡುಗಿಹುದೆ ?
ಅಡಿಗಡಿ ತಾಯ್ವರಿಗಭಯದ ಮುದ್ರಿಕೆ
ತೊಡಿಸುವ ಸಾಹಸ ಉಳಿದಿಹುದೆ ?
ಭಾರ್ಗವ ರಾಮಗೆ ಜನನವನೀಯುವ
ರೇಣುಕೆ ಎಂದಿಗೆ ಜನಿಸುವಳು ?
ಜಗದಲಿ ದುಷ್ಟರ ಕಿರುಕುಳ ಕಳೆಯುವ
ಅಭಯವ ಜನಕೆಂದೀಯುವಳು ?
ನಿಮ್ಮೆದೆ ರಕ್ತವ ಬಸಿಯುತ ತಾಯಿಗೆ
ಮಂಗಳ ಸ್ನಾನವಗೈಸುವಿರೆ ?
“ನಮ್ಮಿ ಕ್ಷಾತ್ರದ ಊಟೆಯು ಚಿರವಿದೆ”
ಎಂಬುದು ತಾಯಿಗೆ ತೋರುವಿರೆ ? || 1 ||
“ಶರ್ಮನಲ್ಲ ನಾ ವರ್ಮನು” ಎನುತಲಿ
ಕರ್ಮಠ ಮಯೂರನೇಳುವನೆ ?
ಧರ್ಮದ ಕಾರ್ಯಕೆನುತ ಕದಂಬರ
ವರ್ಮ ಪರಂಪರೆ ತರಲಿಹನೆ ?
ಚಾಲುಕ್ಯ ವಿಕ್ರಮ ಬರಲಿಹನೆ
ಬಲಿದೋರುವನೇ ದುಷ್ಟರಿಗೆಲ್ಲ ?
ಕಲಿತನದಿಂದಲಿ ಕಾದುತಲಿಂದಿಗೆ
ಅಳಿಸುವನೆ ದುಷ್ಟರ ಸೊಲ್ಲ ?
ಕಲ್ಯಾಣದ ಅನುಭವ ಮಂಟಪ
ನಮ್ಮೆಲ್ಲರ ಅರಿವನು ಬೆಳಗುವುದೆ ?
ಅಲ್ಲಮ ಪ್ರಭು ಬಸವಣ್ಣನ ನುಡಿಯಿಂ
ಬಲ್ಲಿದರನು ಎಚ್ಚರಿಸುವುದೇ ?
ನಿಮ್ಮೆದೆ ರಕ್ತವ ಬಸಿಯುತ ತಾಯಿಗೆ
ಮಂಗಳ ಸ್ನಾನವಗೈಸುವಿರೆ ?
“ನಮ್ಮೀ ಕ್ಷಾತ್ರದ ಊಟೆಯು ಚಿರವಿದೆ”
ಎಂಬುದು ತಾಯಿಗೆ ತೋರುವಿರೆ ? || 2 ||
ಮಧ್ವನ ಶಿಷ್ಯ ಪರಂಪರೆ ಏಳಲಿ
ಸಿದ್ಧಿಸಲವರಾ ತಪಃಶಕ್ತಿ
ಎದ್ಧೇಳಲಿ ಉಡುಪಿಯ ಶ್ರೀಕೃಷ್ಣನು
ಉದ್ಧಟರಿಂದಂದೇ ಮುಕ್ತಿ
ಕರೆಯಲಿ ಭಂಗಾರದ ಮಳೆ ಕಣ್ಣನು –
ತೆರೆಯಲಿ ಹಂಪೆಯ ವಿರುಪಾಕ್ಷ
ಹರಿಹರ ಮತ್ತವತರಿಸಲಿ ಕಾಣುವ –
ವಿದ್ಯಾರಣ್ಯರ ಪ್ರತ್ಯಕ್ಷ
ತಾಳಿಕೋಟೆಯಲಿ ಹರಿದಿಹ ರಕ್ತವು
ಕಾಳಿಯ ತೃಷೆಯನು ತಣಿಸಿಲ್ಲ
ಬಾಳಲೆ ಸೋಲನು ಸಹಿಸುವ ದಹಿಸುತ
ಅಳಿಯಿತೆ ವಿಕ್ರಮವಿಂದೆಲ್ಲ ?
ನಿಮ್ಮೆದೆ ರಕ್ತವ ಬಸಿಯುತ ತಾಯಿಗೆ
ಮಂಗಳ ಸ್ನಾನವಗೈಸುವಿರೆ ?
“ನಮ್ಮೀ ಕ್ಷಾತ್ರದ ಊಟಿಯು ಚಿರವಿದೆ”
ಎಂಬುದು ತಾಯಿಗೆ ತೋರುವಿರೆ ? || 3 ||
ಸಾಯದು ಚನ್ನಮ್ನನ ಆ ವಾಣಿಯು
ರಾಯಣ್ಣನ ಖಡ್ಗದ ಶಕ್ತಿ
ಮಾಯದು ನರಗುಂದದ ಆ ಗಾಯವು
ನೋಯದೆ ? ಸಿಡಿಯದೆ ಜನಶಕ್ತಿ ?
ಭಾರತಮಾತೆಯ ಕೀರ್ತಿ ಪತಾಕೆಯ –
ನೇರಿಸಲೆಂದಿಗು ನಾವ್ಮುಂದೆ
ಉರಿಸಲು ಎಮ್ಮಯ ಜೀವನ ಜ್ಯೋತಿಯ
ಬರುವೆವು ಬೀಳುವೆವೇ ಹಿಂದೆ ?
ಮರೆತ ಪರಂಪರೆ ನೆನೆಯುತ ಭರತನ
ನಾಡನು ಕಟ್ಟಲು ಬರುತಿಹೆವು
ಮರೆಯತಲಹಮಿಕೆ ಸಮರಸ ಭಾವದಿ
ಉರಿಸಲು ತನುವನು ಮುಂದಿಹೆವು
ನಿಮ್ಮೆದೆ ರಕ್ತವ ಬಸಿಯುತ ತಾಯಿಗೆ
ಮಂಗಳ ಸ್ನಾನವಗೈಸುವಿರೆ ?
“ನಮ್ಮೀ ಕ್ಷಾತ್ರದ ಊಟಿಯು ಚಿರವಿದೆ”
ಎಂಬುದು ತಾಯಿಗೆ ತೋರುವೆರೆ ? || 4 ||