ಬನ್ನಿ ಹಿಂದು ವೀರರೇ ಮುಂದೆ ಸಾಗುವಾ

ಬನ್ನಿ ಹಿಂದು ವೀರರೇ ಮುಂದೆ ಸಾಗುವಾ
ವೀರಮಾತೆ ಪುತ್ರರೆಂದು ಧೀರ ಸಂತಾನರೆಂದು
ಧರೆಯೊಳಿಂದು ಸಾರುವಾ ಮುಂದೆ ಸಾಗುವಾ || ಪ ||

ತಾಯ ಸೇವೆಗಾಗಿ ಬನ್ನಿ ಧ್ಯೇಯಕಾಗಿ ದುಡಿವ ಬನ್ನಿ
ನಿದ್ದೆ ತೊರೆಯುವಾ, ಎದ್ದು ನಿಲ್ಲುವಾ, ಸಿದ್ಧರಾಗುವಾ
ಕತ್ತಲನ್ನು ಕಬಳಿಸುತ್ತ, ಸುತ್ತ ಬೆಳಕನರಳಿಸುತ್ತ
ಮುಕ್ತ ರವಿಯು ಮೂಡುವಾ ನೋಟ ನೋಡುವಾ || 1 ||

ಭಗವ ಧ್ವಜ ಹಾರುತಿಹುದು, ಮುಗಿಲ ಮೇಲೇರುತಿಹುದು
ಶುಭವ ಕೋರುತಾ, ಅಭಯವೀಯುತಾ, ಪ್ರಭೆಯ ಬೀರುತಾ
ಭೋಗ ವಿಷಯ ರಾಗ ತ್ಯಜಿಸಿ, ತ್ಯಾಗ ಭಾವ ಮನದಿ ನಿಲಿಸಿ
ಭಾಗ್ಯಪೂರ್ಣ ನಾಡ ಯೋಗ್ಯ ಮಕ್ಕಳೆನಿಸುವಾ || 2 ||

ಮುಂದೆ ನಡೆಯೆ ಸ್ವರ್ಗದ್ವಾರ, ಹಿಂದೆ ಸರಿಯೆ ನರಕ ಘೋರ
ಎಂದು ಸಾರುವಾ, ಮುಂದೆ ಸಾಗುವಾ, ವಿಜಯ ಗಳಿಸುವಾ
ಮುಂದುವರಿಯೆ ತಡೆವರಾರು? ಸಂಘಶಕ್ತಿಗೆದುರು ಯಾರು?
ಅಸುರ ಬಲವು ಬೆದರಿ ಜಾರುತಿಹುದ ಕಾಣುವಾ || 3 ||

ಜಯ ಜಯ ಜಯ ಮಾತೃಭೂಮಿ, ಮಂಗಳಕರ ಪುಣ್ಯಭೂಮಿ
ಎಂದು ಪಾಡುವಾ, ಘೋಷಗೈಯುವಾ, ಹರ್ಷಗೊಳ್ಳುವಾ
ಮಾತೃಭಕ್ತ ಹೃದಯವಿರಲು, ಈಶನೊಲುಮೆ ಬಲವದಿರಲು
ಕಾಲ ಯಮನ ತಡೆಯುವಾ ಧೀರರೆನಿಸುವಾ || 4 ||

Leave a Reply

Your email address will not be published. Required fields are marked *