ಬಾಳಬೇರಿನ ಬಾಯ್ಗೆ ಹರಿವ ಸಂಸ್ಕೃತಿಯೊರತೆ
ಹೊರಡಿಸುವ ಹಾಡಿನಲಿ ಕರಗಿ ಕೊರತೆ
ಮಣ್ಣಿನಲಿ ಮಲಗಿಯೂ ಚೈತನ್ಯವಾಗೆದ್ದು
ನಡೆದು ನುಡಿವಂಥ ಈ ನಾಡ ಚರಿತೆ || ಪ ||
ಬುವಿಯ ಬಸಿರಿನ ಆಳದಾಳದಲಿ ಆಚೀಚೆ
ಅಂಡಲೆವ ಸ್ರೋತಗಳ ಏತ ಹೊಡೆದು
ಹಲಬಗೆಯ ಬಣ್ಣಗಳ ಸತ್ವಗಳ ತತ್ವಗಳ
ಹೂ ಹಣ್ಣ ರೂಪಿಸುವ ಚಕ್ರಕರ್ಮ || 1 ||
ನುಡಿಗೆ ನಡೆಯೇ ಭಾವಾನುವಾದಂತೆ
ಹಿರಿಬದುಕು ಬಾಳ್ದವರ ಮುಖಮಾಲಿಕೆ
ತಳಿರ ಸೊಂಪಿನೆಡೆಯೆಡೆಯಲ್ಲು ತೋರುತಲೆದ್ದು
ಸಿಂಗಾರವಾದಂತೆ ಬೋಧಿ ಮರಕೆ || 2 ||
‘ಕತ್ತಿ ಮುರುಕ’ನ ಒಗರು, ಕೆತ್ತಿದಷ್ಟೂ ಚಿಗುರು
ಕಾಲ ಕಾಲಾಡಿಸದ ಮೂಲಜಾಲ
ಬಾಹುಸಂಕುಲ ಬೀಸಿ ಯುಗದಗಲ ಜಗದಗಲ
ಮೆರೆವ ಸುವಿಶಾಲ ವಿಜಿಗೀಷು ಆಲ ! || 3 ||