ಅರ್ಪಿಸುತಿಹೆವೀ ಸೌಧವನಿಂದು ಸಾಧಕ ನಿನ್ನಯ ಪಾವನ ಸ್ಮೃತಿಗೆ
ತನುಮನಧನ ಜೀವನವ ಸಮರ್ಪಿಸಿ ಅಭಿನವ ಭಾರತ ಕಟ್ಟುವ ಕೃತಿಗೆ
ಸೇವೆಯ ಸುಮಧುರ ಸಂಸ್ಕೃತಿಗೆ || ಪ ||
ದೃಢಸಂಕಲ್ಪದ ಇಟ್ಟಿಗೆಯಿಂದ ಕಟ್ಟಿದ ಸುದೃಢ ಭವನವಿದು
ಸಾಸಿರ ಹೃದಯದ ಸಾಗರ ಮಥನದಿ ಹೊಮ್ಮಿದ ಅಮೃತಕಲಶವಿದು
ಸೇವೆಯ ಸುಧೆಯನು ಉಣಿಸುವೆವಿಂದು ಬಾಯಾರಿದ ಹತಭಾಗ್ಯ ಜನತೆಗೆ
ತನು ಮನ ಧನ … || 1 ||
ನಿನ್ನಯ ಘನ ಆದರ್ಶದ ಬದುಕಿನ ಸಾಹಸಗಾಥೆಯ ಪುಟಪುಟವೂ
ಜಡತೆಯ ನೀಗಿಸಿ ಸ್ಫೂರ್ತಿಯ ನೀಡಿದೆ ಧ್ಯೇಯಮಾರ್ಗದಲಿ ಕ್ಷಣಕ್ಷಣವೂ
ಭದ್ರಬುನಾದಿಯ ಹಾಕಿಹೆ ಅಂದು ನಾಡಿನ ಸರ್ವಾಂಗೀಣ ಪ್ರಗತಿಗೆ
ತನು ಮನ ಧನ … || 2 ||
ಸುಳಿವನು ನೀಡದೆ ಪಾಶವ ಬೀಸಿದ ಕಾಲನಿಗುತ್ತರ ನೀಡುವೆವು
ಅನುಪಮ ಅಜರಾಮರ ವ್ಯಕ್ತಿತ್ವದ ಪ್ರತಿರೂಪರು ನಾವಾಗುವೆವು
ವೀರಪ್ರತಿಜ್ಞೆಯ ತೊಟ್ಟಿಹೆವಿಂದು ಧರಿಸುತ ನಾಡೊಲವಿನ ದೀವಟಿಗೆ
ತನು ಮನ ಧನ … || 3 ||
(ಬೆಂಗಳೂರಿನ ಅಜಿತಶ್ರೀ ಕಟ್ಟಡದ ಉದ್ಘಾಟನಾ ಸಮಾರಂಭಕ್ಕಾಗಿ ರಚಿಸಿದ್ದು)