ಆಹಾ ಎಂಥ ಪುಣ್ಯ ಈ ಜನುಮ
ಓಹೋ ದಿವ್ಯಧಾರಿಣಿಯ ಮಹಿಮ
ಇಲ್ಲಿ ವೈಭೋಗ ವೈಭವ ನರ್ತನ
ಎನ್ನ ತಾಯಿ ಭಾರತಿಗೆ ನಮನ || ಪ ||
ನಿನ್ನ ಒಡಲಿನಲಿ ಮಮತೆ ಮಡಿಲಿನಲಿ
ಕಡಲ ಬಿತ್ತರದ ಹಿರಿಮೆಗಳು
ಭವ್ಯ ಮನಸುಗಳ ರಮ್ಯ ದಿನಿಸುಗಳ
ಉನ್ನತ ಸಾಧನೆ ಗರಿಮೆಗಳು || 1 ||
ಸಮರ ರಂಗದಲಿ ನೇಣುಗಂಬದಲಿ
ನೆತ್ತರಿತ್ತ ಬಲಿ ನೆನಪುಗಳು
ಯೋಗ ತ್ಯಾಗಗಳ ಕರ್ಮಕಮ್ಮಟದಿ
ನುಗ್ಗಿ ಮುಗುಳ್ನಗುವ ಹೊಳಪುಗಳು || 2 ||
ತತ್ವ ದರ್ಶನದ ಅನುಭವ ಅನುಭಾವ
ಋಷಿ ಕಲ್ಪನೆಯ ಗುರುತುಗಳು
ಬಾಂದಳ ಭೂಮಿಯ ರಹಸ್ಯ ವಿಸ್ಮಯ
ಶೋಧಿಸಿ ಜ್ಞಾನದ ಮರುತಗಳು || 3 ||
ಸೇವೆಯ ಸ್ಪರ್ಶ ಪರಿಶ್ರಮದ ಹರ್ಷ
ನಾಳೆಯ ನಿರ್ಮಿತ ಸ್ಪೂರ್ತಿಗಳು
ಸಾಮರಸ್ಯದ ಸಮಾನ ನೆಲೆಗೆ
ನಾವು ದಿವ್ಯತೆಯ ಮೂರ್ತಿಗಳು || 4 ||