ಅಧರ್ಮ ಆಸುರಿ ವೃತ್ತಿಯನಳಿಸುವ ಧರ್ಮೋದ್ಧಾರವೇ ನಮ್ಮ ಮತ
ಸಾವಿನ ಮುಖದಲು ಅಂಜದೆ ಅಳುಕದೆ ಅಂತಿಮ
ವಿಜಯವು ನಮ್ಮ ಮತ || ಪ ||
ಕಾದಾಡುವ ಕೈಗೊಂಡ ಗುರಿಯನು ಮುಟ್ಟುವುದೇ ನಿಜ ಪುರುಷಾರ್ಥ
ರಾಮ ಕೃಷ್ಣ ವಿದ್ಯಾರಣ್ಯರು ವೀರ ಶಿವಾಜಿಯ ಸಫಲವ್ರತ || 1 ||
ನಮ್ಮೀ ರಾಷ್ಟ್ರದ ಧರ್ಮ ಸಂಸ್ಕೃತಿಯ ವಿಸ್ತಾರಕೆ ಮೇಣ್ ರಕ್ಷಣೆಗೆ
ರಾಷ್ಟ್ರ ಜೀವನವ ಸಂಪದಗೊಳಿಸುವ ಸಾಮರ್ಥ್ಯದ ಹಿರಿಗುರಿಯೆಡೆಗೆ || 2 ||
ಮಹಾನವಮಿಯ ಶಸ್ತ್ರ ಪೂಜೆಯಿದು ಶಕ್ತಿಯ ಘನತರ ಸಂದೇಶ
ಎದೆಗುಂದದೆ ಮುನ್ನಡೆಯುತ ಯಶವನು ಪಡೆಯುವ ಸಾಹಸ ಸಂಕೇತ || 3 ||
ಸಿರಿಯಿರಲಿ ಮೇಣ್ ಗೆಲುವಿರಲಿ ವೈಭವ ಸಾಮರ್ಥ್ಯವೆ ಇರಲಿ
ಎಲ್ಲವು ಜನ ಕಲ್ಯಾಣಕೆ ಮೀಸಲು ಎನ್ನುವ ಸಂಘದ ಸಂದೇಶ || 4 ||
ನಿಸ್ಪೃಹತೆಯ ನಿಸ್ಸೀಮತೆಯಾ ನಿರ್ಮಲ ತತ್ವದ ಸಂಕೇತ
ಶಮೀ ಪತ್ರವನು ಎಲ್ಲರೆಲ್ಲರಿಗೆ ವಿನಿಯಮಗೊಳಿಸುವ ಸಂತೋಷ || 5 ||
ಜನ ಮಾನಸದಲಿ ಶಕ್ತಿಯ ಕಲ್ಪನೆ ಒಡಮೂಡಿಸುವಾ ಶುಭದಿನವು
ಬಲೋಪಾಸನೆ ಜಯೋಪಾಸನೆಗಿದುವೇ ಪ್ರೇರಣೆಯಾ ದಿನವು || 6 ||
ರಾಕ್ಷಸ ಶಕ್ತಿಯ ಮರ್ದನ ಗೈವಾ ಶಕ್ತಿಯ ಆರಾಧನ ದಿನವು
ಧರ್ಮ ಸಂಸ್ಕೃತಿಯ ರಕ್ಷಿಸಿ ಶಾಶ್ವತ ಬೆಳೆಸುವ ವಿಜಯದ ಹೊಸದಿನವು || 7 ||