ಎದ್ದು ನಿಲ್ಲು ವೀರ, ದೇಶ ಕರೆದಿದೆ
ಪಡೆಯ ಕಟ್ಟು ಧೀರ, ಸಮರ ಕಾದಿದೆ
ರಣ ಕಹಳೆಯ ಹೂಂಕಾರದ ಸದ್ದು ಮೊರೆದಿದೆ
ರಕ್ತಸಿಕ್ತ ಬಲಿಪೀಠದ ದೃಶ್ಯ ಮೆರೆದಿದೆ || ಪ ||
ಗಡಚಿಕ್ಕುವ ಆಕ್ರಂದನ ನರಳಾಟ ಚೀರಾಟ
ಕಿವಿಗೊಡದಿರು ಎದೆಗೆಡದಿರು ನುಗ್ಗುತಲಿ ಮುಂದಕೆ
ದೇಹ ಬಿದ್ದು ಹೆಣಗಳುರುಳಿ ರಕ್ತದಾಟದೋಕುಳಿ
ಹೋರುವ ಛಲ ಕುಗ್ಗದಿರಲಿ ಧೈರ್ಯ ಮೇರು ಪರ್ವತ || 1 ||
ಹೆಜ್ಜೆ ಹೆಜ್ಜೆ ತುಳಿತಕೆ ನೆಲದೆದೆಯ ಕಂಪನ
ಮುಂದೆ ಮುಂದೆ ಧಾವಿಸೆ ಕೇಳಿ ವಿಜಯ ಸ್ಪಂದನ
ಎದೆತಟ್ಟಿ ತೊಡೆ ತಟ್ಟಿ ಅಬ್ಬರಿಸುತ ಚಲಿಸಲಿ
ವೈರಿ ಶಿಬಿರ ತತ್ತರಿಸುವ ಅಗ್ನಿಜ್ವಾಲೆ ಉಜ್ವಲ || 2 ||
ತಾಯಿಯ ಕರೆ ಮೊಳಗಿದೆ ಹೃದಯದೀಪ ಬೆಳಗಿದೆ
ಶಕ್ತಿಧೂಪ ಹರಡಿದೆ ದಿಗಂತದೆತ್ತರ
ಸ್ವಾತಂತ್ರದ ಕರೆಯಲಿ ರಾಷ್ಟ್ರಪುರುಷ ಪೂಜೆಗೆ
ಉರಿಯುತಿರಲಿ ಕಾಂತಿದುಂಬಿ ತ್ಯಾಗದೀಪದಾರತಿ || 3 ||